ದೇಹ ಮತ್ತು ಮನಸ್ಸು-
ಸೃಷ್ಟಿಯಾದಿಯಿಂದಲೂ ಇರುವಿಕೆಗೆ ಶರೀರ ಮತ್ತು ಮನಸ್ಸು ಎಂಬಿವೆರಡು ಆಧಾರಭೂತವೆನಿಸಿವೆ. ಅವುಗಳ ಪರಸ್ಪರ ಸಂಬಂಧ ಬಹುಮುಖವಾಗಿದೆ. ಕೆಲವು ವೇಳೆ ಅವು ತುಂಬ ಹೊಂದಿಕೊಂಡು ನಡೆಯುತ್ತವೆ. ಮತ್ತು ಕೆಲವು ವೇಳೆ ಒಂದಕ್ಕೊಂದಕ್ಕೆ ತೀವ್ರವಾದ ವಿರೋಧ ಕಂಡುಬರುತ್ತದೆ. ಇಂಥ ಎರಡು ಸ್ಥೂಲ ಬಾಂಧವ್ಯಗಳ ನಡುವೆ ಅನೇಕ ದರ್ಜೆಗಳಿವೆ. ಆದಿಕಾಲದ ಮನುಷ್ಯ ಮನಸ್ಸೇ ಆತ್ಮವೆಂದು ಭಾವಿಸುತ್ತಿದ್ದ. ಆತ್ಮ ದೇಹದೊಳಗಿರುತ್ತದೆಯೆಂದೂ ಅದರಿಂದ ಮೈಗೆ ಯಾವ ಉಪಕಾರವಾಗಲಿ ಅಪಕಾರವಾಗಲಿ ಇಲ್ಲವೆಂದೂ ಅದಕ್ಕೂ ಮೈಯಿಂದ ಒಳ್ಳಿತಾಗಲಿ ಕೆಡುಕಾಗಲಿ ಇಲ್ಲವೆಂದೂ ಆತನ ಅನಿಸಿಕೆ. ಈ ದೇಹ ಮನಸ್ಸಂಬಂಧವನ್ನು ಪಂಜರದೊಳಗಿನ ಗಿಣಿ ಎಂದು ಕರೆಯಬಹುದು. ಪಂಜರದ ಬಾಗಿಲನ್ನು ತೆರೆದರೆ ಗಿಳಿ ಹೇಗೆ ಹಾರಿ ಹೋಗುತ್ತದೋ ಹಾಗೆಯೇ ಸಾಯುವಂದು ದೇಹ ಪಂಜರವನ್ನು ಬಿಟ್ಟು ಆತ್ಮ ಹಾರಿಹೋಗುತ್ತದೆ. ನಾವು ನಿದ್ದೆ ಮಾಡುವಾಗಲೂ ಆತ್ಮ ದೇಹವನ್ನು ಬಿಟ್ಟು ಹೊರಟು ಶರೀರ ಬಾಹ್ಯವಾದ ಅನುಭವಗಳನ್ನು ಪಡೆಯುತ್ತದೆಯೆಂದೂ ಕೆಲವು ವೇಳೆ ಇತರರ ಆತ್ಮಗಳೂ ನಮ್ಮ ಶರೀರವನ್ನು  ಹೋಗುತ್ತವೆಯೆಂದೂ ಆದಿಮರ ಕಲ್ಪನೆ. ತಾವು ಕಾಣುತ್ತಿದ್ದ ಚಿತ್ರವಿಚಿತ್ರವಾದ ಕನಸುಗಳಿಗೆ ಇದೇ ಕಾರಣ, ಆಗಂತುಕ ಆತ್ಮಗಳ ಕೆಲಸವಿದು ಎಂದು ಅವರ ಎಣಿಕೆಯಾಗಿತ್ತು.  ಶರೀರದಿಂದ ಕಳಚಿಕೊಳ್ಳಬಲ್ಲಂಥ ಆತ್ಮದ ಭಾವನೆ ಮನಸ್ಸು ಶರೀರಕ್ಕೆ ಸ್ವಲ್ಪ ಬಿಗಿಯಾಗಿ ಅಂಟಿಕೊಂಡಿದೆ ಎಂಬ ಭಾವನೆಗೆ ಎಡೆಗೊಟ್ಟ ಬಳಿಕ, ಶರೀರ ಮನಸ್ಸುಗಳ ಸಂಬಂಧದಲ್ಲಿ ಮುಖ್ಯ ಬದಲಾವಣೆಯುಂಟಾಯಿತು. ಇದರಿಂದ ಆತ್ಮದ ಭಾವನೆಯೇ ಪರಿತ್ಯಕ್ತವಾಯಿತೆಂದು ಅರ್ಥಮಾಡಿಕೊಳ್ಳಲಾಗದು. ಮರಣಾನಂತರವೂ ತಾನಿರಬಲ್ಲ ನಮ್ಮ ವ್ಯಕ್ತಿತ್ವದ ಆತ್ಮಾಂಶದ ಜೊತೆಗೆ ಮನಸ್ಸೆಂಬ ಮತ್ತೊಂದು ಅಂಶವಿದೆಯೆಂದೂ ಅದು ಬಹು ಮಟ್ಟಿಗೆ ನಮ್ಮ ಮಿದುಳನ್ನೂ ನರಗಳ ವ್ಯವಸ್ಥೆಯನ್ನೂ ಅವಲಂಭಿಸಿದೆಯೆಂದೂ ಅದು ಶರೀರ ಪತನವಾದ ಕೂಡಲೇ ಮಾಯವಾಗುತ್ತದೆಯೆಂದೂ ಈಗ ಪರಿಭಾವಿಸಲ್ಪಟ್ಟಿದೆ. ಒಟ್ಟಿನಲ್ಲಿ ಆತ್ಮ ಮತದ ಸ್ವತ್ತೆಂದು ಪರಿಗಣಿತವಾಗಿ ದರ್ಶನ ಮತ್ತು ಮನಶ್ಯಾಸ್ತ್ರಗಳು ಈಗ ಮನಸ್ತತ್ತ್ವದಲ್ಲಿ ಆಸಕ್ತವಾಗಿವೆ. ಅಲ್ಲದೆ ಅಂಗ ರಚನಾಶಾಸ್ತ್ರವೂ ಶರೀರದ ಹೊಸಗುಣಗಳನ್ನು ಕಂಡುಕೊಂಡು ಮನಸ್ಸು ಮತ್ತು ಶರೀರಗಳ ಸಂಬಂಧ ಹೊಸ ತಿರುವನ್ನು ಹಿಡಿದು ಸಾಗುವಂತೆ ಮಾಡುವುದರಲ್ಲಿ ಸಹಕರಿಸುತ್ತದೆ.

	ಗ್ರೀಕ್ ದಾರ್ಶನಿಕರು ಮನಸ್ಸು (ಸೈಕೀ) ಎಂಬ ಶಬ್ದವನ್ನು ಪ್ರಾಣ, ಆತ್ಮ ಮತ್ತು ಪ್ರಜ್ಞೆ ಎಂಬರ್ಥದಲ್ಲಿ ಉಪಯೋಗಿಸುತ್ತಿದ್ದರು. ಆತ್ಮ ಎಂಬುದು ದೇಹದೊಳಗೆ ಸೇರಿ ಬಿದ್ದಿರುವ ಅಭೌತಿಕ ಸತ್ತ್ವವೆಂದು ಪ್ಲೇಟೊ ಪರಿಭಾವಿಸಿದ್ದ. ದೇಹದೊಂದಿಗೆ ಆತ್ಮಕ್ಕೆ ಜಠರಕ್ಕಿಂತ ಹೆಚ್ಚಿನ ಸಮೀಪ ಸಂಬಂಧವನ್ನು ಅರಿಸ್ಟಾಟಲ್ ಒದಗಿಸಿಕೊಟ್ಟ. ಅಲ್ಲದೆ ಕಣ್ಣಿನ ಪರಿಣತಿಯನ್ನು ದೃಷ್ಟಿ ಹೇಗೆ ತೋರುತ್ತದೋ ಹಾಗೆಯೇ ಶರೀರದ ಪರಿಣತಿಯನ್ನು ಆತ್ಮ ತೋರುತ್ತದೆ ಎಂದು ಹೇಳಿದ. ಶರೀರದ ಸಲುವಾಗಿಯೇ ಆತ್ಮವಿದೆ. ಶರೀರ ಅದರಲ್ಲಿ ತನ್ನ ಸಾಕ್ಷಾತ್ಕಾರವನ್ನು ಕಂಡುಕೊಳ್ಳುತ್ತದೆ. ಇದೇ ಸಮಯದಲ್ಲಿ ಆತ ಪ್ಲೇಟೋನಂತೆಯೇ ಆತ್ಮವೆಂಬುದು ಸಂತತ ಕಾರ್ಯ ಪ್ರವೃತ್ತವೂ ಸೃಷ್ಟಿಶೀಲವೂ ಆದ ವಿವೇಕವೆಂದೂ ಅದು ಸಾವಿಲ್ಲದ ದೈವೀ ಪ್ರಕೃತಿಯೆಂದೂ ಗಣಿಸಿದ್ದ. ತರುವಾಯದ ತತ್ತ್ವವಿಚಾರದ ಮೇಲೆ ಪ್ಲೇಟೋನ ಪ್ರಭಾವ ಹೆಚ್ಚಾಯಿತಲ್ಲದೆ ಮಧ್ಯಯುಗದ ಪರ್ಯಂತರವೂ ಅದೇ ಸರಣಿಯಲ್ಲೆ ಮುಂದುವರಿಯಿತು.

	ಹೀಗೆ ಪ್ಲೇಟೊನಿಂದ ಸೂಚಿಸಲ್ಪಟ್ಟು ಮಧ್ಯಯುಗದಲ್ಲಿ ಬಲಗೊಂಡ ಶರೀರಾತ್ಮ ಭೇದ ತತ್ತ್ವಕ್ಕೆ ಆಧುನಿಕ ಪಾಶ್ಚಾತ್ಯ ದರ್ಶನ ಪ್ರವರ್ತಕನಾದ ಡೇಕಾರ್ಟ್ (1569 -- 1670) ಎಂಬ ಮಹಾಶಯ ತೀವ್ರ ದ್ವೈತರೂಪವನ್ನು ಕೊಟ್ಟ.

	ಈ ಸುಮಾರಿಗೆ ಆತ್ಮಕ್ಕಿಂತಲೂ ಮನಸ್ಸಿನ ವಿಚಾರದಲ್ಲಿ ಜಿಜ್ಞಾಸೆ ನಡೆಸುವುದು ಹೆಚ್ಚು ರೂಢಿಯಲ್ಲಿತ್ತು. ವಿಸ್ತøತತ್ವ ಎಂದರೆ ಹರಡಿರುವಿಕೆಯೇ ಭೌತ ವಸ್ತುವಿನ ಹುರುಳು ಅಥವಾ ದೇಶವ್ಯಾಪಕತೆಯೇ ಭೌತವಸ್ತು, ಸತ್ತ್ವ. ಆದರೆ ಮನಸ್ಸಿನ ತತ್ತ್ವವೋ ಭಾವನೆ.  ಇದಕ್ಕೆ ದೇಶಾವಲಂಬನವಿಲ್ಲ, ಹೀಗೆಂದು ಡೇಕಾರ್ಟ್ ಹೇಳಿದ. ಹೀಗೆ ಒಂದು ಇನ್ನೊಂದಕ್ಕಿಂತ ತೀರ ಭಿನ್ನವಾಗಿದೆ. ಜ್ಞಾನ ಎಂದರೆ ನಮ್ಮೊಳಗಿರುವ ಮನಸ್ಸು ನಮ್ಮ ಹೊರಗಿರುವ ಪ್ರಪಂಚದ ವಸ್ತುವಿನ ಸ್ವಲ್ಪಾಂಶವನ್ನು ಗ್ರಹಿಸುವಿಕೆಯಾಗಿರುವುದರಿಂದ ಜ್ಞಾನವನ್ನು ಪಡೆಯುವುದು ಇನ್ನೇನು ಅಸಾಧ್ಯವೆಂದೇ ಡೇಕಾರ್ಟ್ ಪರಿಭಾವಿಸಿದ. ಆತನ ತರುವಾಯದ ದಾರ್ಶನಿಕರು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿದರು.  ಆತನ ಉತ್ತರಾಧಿಕಾರಿ ನಿಕಲಸ್ ಮೇಲ್‍ಬ್ರಾಂಷ್ (1638 -- 1715) ಅಕೇಷನಲಿಸಂ ಎಂದರೆ ಸಂದರ್ಭ ಸಂಭವತೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ. ಈ  ಸಿದ್ಧಾಂತದಲ್ಲಿ ಜ್ಞಾನ ಒಂದು ಯಕ್ಷಿಣಿ ವಿದ್ಯೆಯಾಗಿದೆ ಎನ್ನಬೇಕು. ಶರೀರವೂ ಮನಸ್ಸೂ ಪರಸ್ಪರ ಪರಿಣಾಮಕಾರಿಗಳಲ್ಲ. ಆದರೆ ಮನಸ್ಸೇನಾದರೂ ಭೌತ ವಸ್ತುವಿನ ವಿಚಾರದಲ್ಲಿ ಕೈಹಾಕಲೆಳಸಿದರೆ ಆಗ ದೇವರು ಮಧ್ಯಸ್ಥನಾಗಿ ಬಂದು ಕೆಲಸವನ್ನು ನಡೆಸಿಕೊಡುತ್ತಾನೆ. ಉದಾಹರಣೆಗೆ, ನಾನು ತೋಳೆತ್ತಬಯಸಿದಾಗ, ಅದನ್ನು ಎತ್ತುವವ ದೇವರು. ಏಕೆಂದರೆ ಮನೋಗತವಾಗಿರುವ ನನ್ನ ಇಚ್ಛೆ ಭೌತವಸ್ತುವಾದ ನನ್ನ ತೋಳಿನ ಮಾಂಸಖಂಡದೊಡನೆ ವ್ಯವಹರಿಸಲಾರದು. ಬೆನೆಡಿಕ್ಟ್ ಸ್ಪಿನೋಜû (1632 -- 1677) ಎಂಬಾತ ಎರಡೂ ಒಂದೇ ಇರುವಿಕೆಯ ಎಂದರೆ ದೇವರ ಎರಡು ಮುಖಗಳು ಎಂದ. ಈ ಪ್ರಕಾರವಾಗಿ ಎರಡು ವಿರುದ್ಧ ಪ್ರಕೃತಿಗಳು ಅವಕ್ಕಿಂತ ಉತ್ತಮವಾದ ಮೂರನೆಯ ಸತ್ತ್ವದಲ್ಲಿ ಮಿಳಿತವಾದವು. ಲೈಬ್‍ನಿಟ್ಸ್ (1646 -- 1716) ಎಂಬಾತ ಭೌತವಸ್ತುವಿಗೂ ಮನಸ್ಸಿಗೂ ಇರುವ ಪರಸ್ಪರ ವ್ಯವಹಾರ ಈ ಹಿಂದೆಯೇ ಏರ್ಪಟ್ಟ ದೈವನಿಯತ ಸಾಮರಸ್ಯದಿಂದ ಸಂಭವಿಸುತ್ತದೆ ಎಂದು ವಾದಿಸಿದ. ಇದು ಹೇಗೆಂದರೆ ಎರಡು ಗಡಿಯಾರಗಳು, ಎರಡನ್ನೂ ಒಬ್ಬನೇ ನಿರ್ಮಾಣ ಮಾಡಿರುವ ಕಾರಣದ ದೆಸೆಯಿಂದ, ಒಂದಕ್ಕೊಂದಕ್ಕೆ ಕಾರ್ಯ ಕಾರಣಭಾವವಿಲ್ಲದಿದ್ದರೂ ಒಂದೇ ಕಾಲವನ್ನು ತೋರುವಂತೆ. ಶರೀರಕ್ಕೂ ಮನಸ್ಸಿಗೂ ಇರುವ ಸಂಬಂಧದ ಕತೆ ಪಾಶ್ಚಾತ್ಯ ದರ್ಶನದ ದಾರಿಯಲ್ಲಿ ಸಾಗುತ್ತ ಜಾರ್ಜ್ ಬಾಕ್ರ್ಲೆ ಎಂಬಾತನ ಸಮೀಪಕ್ಕೆ ಬಂದಾಗ ಥಟ್ಟನೆ ಬೇರೊಂದು ತಿರುವಿನಲ್ಲಿ ತಿರುಗಿ ಬಿಡುತ್ತದೆ. ದಿಟ್ಟತನದಿಂದ ಆತ ಭೌತವಸ್ತುವಿಗೆ ಅಸ್ತಿತ್ವವೇ ಇಲ್ಲವೆನ್ನುತ್ತಾನೆ. ವಸ್ತುವೆನ್ನುವುದು ಮನುಷ್ಯರ ಮನಸ್ಸಿನಲ್ಲಾಗಲಿ ದೇವರ ಮನಸ್ಸಿನಲ್ಲಾಗಲಿ ಒಟ್ಟೈಸಿರುವ ಗುಣ ಸಮೂಹವಲ್ಲದ ಮತ್ತೇನೂ ಅಲ್ಲ. ವಸ್ತುವಿನ ಗುಣಗಳಿಗಿಂತ ಭಿನ್ನವಾದ ವಸ್ತು ಎಂಬ ಹೆಸರಿನ ಗಹನಸತ್ತ್ವ ಇಲ್ಲವೇ ಇಲ್ಲ.  ಗುಣಗಳನ್ನು ಕಿತ್ತೊಗೆದರೆ ಮೇಜೇ ಅದೃಶ್ಯವಾಗುತ್ತದೆ. ಅರ್ನ್‍ಸ್ಟ್ ಹೆಗಲ್ ಎಂಬಾತ ಮನಸ್ಸು ಎಂಬುದು ಭೌತವಸ್ತುವಾದ ಮೆದುಳಿನ ಒಂದು ಕಾರ್ಯವೆಂದು ಪರಿಭಾವಿಸಿದ. 

	ಒಟ್ಟಿನಲ್ಲಿ ಶರೀರ ಮತ್ತು ಮನಸ್ಸುಗಳ ಸಂಬಂಧದ ವಿಷಯವನ್ನು ಪಾಶ್ಚಾತ್ಯ ದರ್ಶನಗಳ ರೀತ್ಯ, ಮೂರು ದೃಷ್ಟಿಗಳಿಂದ ನೋಡಬಹುದು.

	1  ಪರಸ್ಪರ ವ್ಯವಹಾರ (ಇಂಟರ್ ಆ್ಯಕ್ಷನಿಸಂ) : ಶರೀರ ಮತ್ತು ಮನಸ್ಮ್ಸಗಳು ಭಿನ್ನವಾಗಿದ್ದರೂ ಅವು ಎಂತೋ ಪರಸ್ಪರವಾಗಿ ವ್ಯವಹರಿಸುತ್ತವೆ. ಇದು ಡೇಕಾರ್ಟ್ ಎಂಬಾತನ ಮತ. ಆತ ದ್ವೈತವನ್ನು ಎತ್ತಿ ಹಿಡಿದಿದ್ದರೂ ದೇಹ ಮತ್ತು ಮನಸ್ಸು ಒಂದನ್ನೊಂದು ಪ್ರಭಾವಿಸುತ್ತದೆ, ಅದು ಹೇಗೋ ತಿಳಿಯದು ಎನ್ನುತ್ತಿದ್ದ.     

	2  ಶರೀರ ಮನುಸ್ಸುಗಳ ಸಮಾಂತರತೆ (ಸೈಕೊ-ಫಿಸಿಕಲ್ ಪ್ಯಾರಲಲಿಸಂ); ಈ ತತ್ತ್ವ ಶರೀರಕ್ಕೂ ಮನಸ್ಸಿಗೂ ಇರುವ ಸಂಬಂಧವನ್ನು ಒತ್ತಿ ಹೇಳುತ್ತದೆ. ಅವು ಭಿನ್ನವಾಗಿದ್ದರೂ ಒಂದು ಮನಸ್ಥಿತಿಗೆ ಸಂವಾದಿಯಾಗಿ ಒಂದು ಶರೀರ ಸ್ಥಿತಿಯಿರುವಂತೆ ಅವು ಯಾವಾಗಲೂ ಸಮಾಂತರದಲ್ಲೇ ವರ್ತಿಸುತ್ತವೆ. ಅವಕ್ಕೆ ಪರಸ್ಪರವಾಗಿ ಸಂಬಂಧವಿಲ್ಲದಿದ್ದರೂ ಸಂವಾದಿತ್ವ ಇದೆ. ಇದು ಲೈಬ್‍ನಿಟ್ಸನ ಮತವನ್ನು ತುಂಬ ಹೋಲುತ್ತದೆ.      

	3  ಗೌಣಘಟನಾಸಿದ್ಧಾಂತ (ಎಪಿಫೆನಾಮಿನಲಿಸಂ):  ಶರೀರವೊಂದಕ್ಕೆ ನಿಜವಾದ ಇರುವಿಕೆ ಉಂಟು. ಅದು ಚೆಲ್ಲುವ ಒಂದು ತೆರದ ನೆರಳು ಮನಸ್ಸು ಎಂದು ಅದು ಸ್ಥಾಪಿಸುತ್ತದೆ. ಇದು ಹೇಗಲ್ ಹೇಳಿದ ಮಾತಿಗೆ ಸುಮಾರಾಗಿ ಸರಿಹೊಂದುತ್ತದೆ.     

	ಇತ್ತೀಚೆಗೆ ಶರೀರ ಮತ್ತು ಮನಸ್ಸಿನ ಸಂಬಂಧದ ವಿಚಾರದಲ್ಲಿ ಮತ್ತೊಂದು ಮತವೆದ್ದಿದೆ. ಇದನ್ನು ಸಮುತ್ಪತ್ತಿವಾದವೆಂದು (ಎಮರ್ಜೆಂಟ್ ತಿಯೊರಿ) ಕರೆಯಬಹುದು. ಪ್ರಕೃತಿ ದೇಹದಿಂದ ಮನಸ್ಸನ್ನು ಉತ್ಪಾದಿಸುತ್ತದೆ. ಏಕೆಂದರೆ ಕೆಳಗಣದರಿಂದ ಮೇಲಿನದು ಮೂಡವುದು ಸಹಜ. ಅಣುವಿನಿಂದ ಜೀವಾಣು ಅಥವಾ ಜೀವಕೋಶ ಹುಟ್ಟಿಕೊಳ್ಳುತ್ತದೆ.  ಜೀವಕೋಶಗಳಿಂದ ಜೀವಸಂಸ್ಥೆ ಹೀಗೆಯೇ ಮೇಲಕ್ಕೇರುತ್ತ ಶರೀರದಿಂದ ಮನಸ್ಸು ಮೂಡುತ್ತದೆ. ಇದೊಂದೇ ತರಹ ಸಹಜವಿಕಾಸದ ನಿಚ್ಚಣಿಗೆ; ಇಲ್ಲಿ ಮೇಲಿನ ಮೆಟ್ಟಿಲನ್ನೇರುತ್ತ ಹೋದಾಗೆಲ್ಲ ಕೆಳಗಿನ ಮೆಟ್ಟಿಲಿನ ಪ್ರಾಶಸ್ತ್ಯ ಕುಗ್ಗುತ್ತದೆ.

	ಶರೀರ ಮನಸ್ಸುಗಳ ಸಂಬಂಧದ ವಿಚಾರದಲ್ಲಿ ಆಧುನಿಕ ಮನಶ್ಯಾಸ್ತ್ರಜ್ಞರು ದಾರ್ಶನಿಕ ಕಟ್ಟು ತಡೆಗಳನ್ನು ಬಿಚ್ಚಿಹಾಕಿ ಸ್ವತಂತ್ರರಾಗಿ ಪ್ರವರ್ತಿಸಲು ಕಾತರರಾಗಿದ್ದರೂ ತತ್ಸಂಬಂಧವಾದ ಮನಶ್ಯಾಸ್ತ್ರೀಯ ಸಿದ್ಧಾಂತಗಳನ್ನು ಈ ದಾರ್ಶನಿಕ ಹಿನ್ನೆಲೆಯಲ್ಲಿ ನೋಡುವುದು ಸೂಕ್ತ. ಶರೀರ ಮತ್ತು ಮನಸ್ಸಿನ ಸಂಬಂಧದ ವಿಷಯದಲ್ಲಿ ಕೆಲವು ಮನಶ್ಯಾಸ್ತ್ರೀಯ ಸಿದ್ಧಾಂತಗಳು  ಪರಸ್ಪರ ವ್ಯವಹರಣ ಹಾಗೂ ಶರೀರ ಮನಸ್ಸಮಾಂತರತೆ ಮತ್ತು ಪರಸ್ಪರ ವ್ಯವಹಾರ ಇವೆರಡು ಸಿದ್ಧಾಂತಗಳ ಮಿಶ್ರಣಗಳಾಗಿವೆ. ದೇಹ ಮತ್ತು ಮನಸ್ಸು ಪ್ರಚೋದಿಸುತ್ತವೆ ಎಂಬುದನ್ನು ಮನಶ್ಯಾಸ್ತ್ರಜ್ಞ ಒಪ್ಪಿಕೊಳ್ಳುತ್ತಾನೆ. ಅನ್ಯೋನ್ಯ ಕ್ರಿಯೆ ಮಿದುಳು ಮತ್ತು ನರಮಂಡಲದ ಮೂಲಕ ನಡೆಯುತ್ತದೆ. ಆತ ಇದನ್ನೊಂದು ಗಹನ ರಹಸ್ಯವಾಗಿಡುವುದಿಲ್ಲ. ಅನುಭವಕ್ಕೆ ಬರುವಂಥ ಅಂಶವೆಂದೇ ಅದನ್ನು ಎಣಿಸುತ್ತಾನೆ. ಪ್ರತಿಯೊಂದು ಮನಸ್ಥಿತಿಗೂ ಸಂವಾದಿಯಾಗಿ ಶರೀರ ಸ್ಥಿತಿಯೊಂದುಂಟು. ಶರೀರದ ವಿಷಯದಲ್ಲೂ ಹಾಗೆಯೇ. ಮನಶ್ಯರೀರ ಸಂಸ್ಥೆ ಒಂದೇ ಒಂದು; ನರದ ವಿಕ್ಷಿಪ್ತಿಯಿಲ್ಲದೆ ಮನೋವಿಕ್ಷಿಪ್ತಿ ಸಂಭವಿಸದು. ದಿನಬಳಕೆಯ ಬಾಳುವೆಯಲ್ಲೂ ಈ ಅನ್ಯೋನ್ಯ ಪ್ರತಿಕ್ರಿಯೆಗಳಿಗೆ ಅನೇಕ ಉದಾಹರಣೆಗಳು ಸಿಕ್ಕುತ್ತವೆ. ಒಳ್ಳೆ ಊಟವನ್ನು ಉಂಡ ಬಳಿಕ ಜನರು ಸಂತೃಪ್ತರಾಗಿರುತ್ತಾರೆ. ಅಜೀರ್ಣ ರೋಗಿಗಳು ಅನೇಕ ವೇಳೆ ಅಪ್ರಸನ್ನರಾಗಿರುತ್ತಾರೆ. ಮನೋಧರ್ಮ ಮನಸ್ಸಿಗೆ ಸಂಬಂಧಪಟ್ಟದ್ದು. ಅಜೀರ್ಣ ದೇಹಕ್ಕೆ ಸಂಬಂಧಪಟ್ಟದ್ದು. ಕೆಲವು ಕಾಯಿಲೆಗಳು ಮೂಲದಲ್ಲಿ ಮನಶ್ಯರೀರಕಗಳೆಂದು ತಿಳಿದುಬರುತ್ತದೆ. ಆ ಕಾಯಿಲೆ ಶರೀರದ ಒಂದು ಸ್ಥಿತಿಯಾದರೂ ಅದನ್ನು ಸಾಂಕ್ರಾಮಿಕ ಜಾಡ್ಯ ಎನ್ನುವಂತಿಲ್ಲ. ವಿಷಾಣುಗಳಿಂದ ಅಥವಾ ಬ್ಯಾಕ್ಟೀರಿಯಗಳಿಂದ ಆದುದು ಎನ್ನುವಂತೆಯೂ ಇಲ್ಲ. ಆದರೆ ಒಂದು ಮನಃಸ್ಥಿತಿಯ ನೆಲೆಯಿಂದ ಆದುದು. ಸದಾ ಚಿಂತೆಯಲ್ಲಿರುವವನ ಹೊಟ್ಟೆಯಲ್ಲಿ ಹುಣ್ಣುಗಳೇಳುವುವೆಂದು ಈಗ ಸಿದ್ಥಾಂತವಾಗಿದೆ.    

	ಪ್ರಾಯೋಗಿಕ ಮನಶ್ಯಾಸ್ತ್ರದ ಪ್ರವರ್ತಕನಾದ ವಿಲೆಲ್ಮ್‍ವುಂಟ್ (1832 --1920) ಎಂಬ ಪಂಡಿತ ವಾಸ್ತವಿಕತೆಯ ದೃಷ್ಟಿಯಿಂದ ಮನಶ್ಯರೀರ ಸಂಬಂಧದ ಸಮಸ್ಯೆಯನ್ನು ಪರಿಶೀಲಿಸಬೇಕೆಂದು ಸೂಚಿಸಿದ್ದಾನೆ. ಮನಸ್ಸೂ ಶರೀರವೂ ಬೇರೆ ವಸ್ತುಗಳೆಂದು ಪರಿಭಾವಿಸುವುದಾದರೆ ನಾವು ಅವನ್ನು ಯಾವ ದೃಷ್ಟಿಯಿಂದ ನೋಡಿದರೂ ಅವುಗಳ ಪರಸ್ಪರ ಸಂಬಂಧ ಒಂದು ಒಗಟೆಯಾಗಿಯೇ ನಿಲ್ಲುತ್ತದೆ. ಅವೆರೆರಡೂ ಒಂದರಂತೆ ಮತ್ತೊಂದಿದ್ದರೆ ಆಗ ಅವಕ್ಕೆ ಸ್ವಾತಂತ್ರವಿಲ್ಲ; ಅವು ಹಾಗಿಲ್ಲದಿದ್ದರೆ ಡೇಕಾರ್ಟ್ ಹೇಳುವಂತೆ, ಜ್ಞಾನವೆಂಬುದೇ ಅಸಂಭವವೆನಿಸುತ್ತದೆ. ನಾವು ವಸ್ತುತಃ ಪಡೆದಿರುವುದು ಎರಡು ಪದಾರ್ಥಗಳನ್ನಲ್ಲ. ಆದರೆ ಒಂದೇ ಒಂದು ಅನುಭವವನ್ನು, ಭಿನ್ನ ಗುಣಗಳುಳ್ಳ ಎರಡು ಪದಾರ್ಥಗಳಿವೆಯೆಂದು ಸಂಸ್ಥಾಪಿಸುತ್ತಲೋ ಇಲ್ಲವೆ ಒಂದೇ ಒಂದು ಪದಾರ್ಥಕ್ಕೆ ಎರಡು ರೀತಿಯ ಗುಣಗಳಿವೆ ಎಂದು ಪರಿಭಾವಿಸುತ್ತಲೋ ಹೊರಡುವುದಕ್ಕೆ ಬದಲು ಮನಶ್ಯಾಸ್ತ್ರ (1) ಅನುಭವಿಸುವವನು ಮತ್ತು (2) ಆತನ ಅನುಭವದ ವಿಷಯಗಳು ಎಂಬೆರಡು ನಿಲವುಗಳಿಂದ ಒಂದೇ ಒಂದು ಅನುಭವವನ್ನು ನಿರೀಕ್ಷಿಸಬಹುದೆಂಬ ದಾರಿಯನ್ನು ಹಿಡಿಯುತ್ತದೆ.       

	ವಿಲಿಯಂ ಜೇಮ್ಸ್ (1842 --1910) ಎಂಬಾತ ಹೇಳುವ ಹಾಗೆ ಮನಶ್ಯಾಸ್ತ್ರ ಆಧಾರವಾಗಿಟ್ಟುಕೊಳ್ಳಬೇಕಾಗಿರುವುದು ಒಂದೇ ಒಂದು ವಿಷಯ - ಆಲೋಚನಾಕ್ರಿಯೆ ವಾಸ್ತವವಾಗಿ ಉಂಟು ಎಂಬುದು. ಇದನ್ನೆತ್ತಿಕೊಂಡು ವಿಶ್ಲೇಷಿಸಬೇಕು. ಆದುದರಿಂದ ನಮ್ಮ ಮೂಲ ಪ್ರಸ್ಥಾನ ಯಾವುದೆಂದರೆ ಆಲೋಚನಾ ವಾಸ್ತವಿಕತೆಯಲ್ಲದೆ ಮನಸ್ಸು ಅಥವಾ ಶರೀರಗಳ ಅಸ್ತಿತ್ವವಲ್ಲ. ಆದರೆ ಪ್ರತಿಯೊಂದು ಆಲೋಚನೆಯೂ ಪೌರುಷೇಯ ಪ್ರಜ್ಞಾಂಶ. ಈ ಪೌರುಷೇಯಪ್ರಜ್ಞೆಯನ್ನೇ ಅಹಂ ಅಥವಾ ತಾನು ಎಂದು ಕರೆಯಬಹುದು. ಜೀವಾತ್ಮಗಳ ಅಸ್ತಿತ್ವವನ್ನು ಕುರಿತು ಯಾವ ಮನಶ್ಯಾಸ್ತ್ರವೂ ಪ್ರಶ್ನೆ ಎತ್ತಲಾಗದು. ಜೇಮ್ಸ್‍ನ ಅಭಿಪ್ರಾಯದ ಪ್ರಕಾರ, ಜೀವಾತ್ಮ ನಾಲ್ಕು ಅಂಶಗಳಿಂದ ಕೂಡಿದೆ. 1 ಭೌತಿಕಾತ್ಮ 2 ಸಾಮಾಜಿಕಾತ್ಮ 3 ಆಧ್ಯಾತ್ಮಿಕಾತ್ಮ 4 ಶುದ್ಧಾಹಂಕಾರ. ಶರೀರವೆನ್ನುವುದು ನಮ್ಮ ಭೌತಿಕಾತ್ಮದ ಅಂತರತಮಾಂಶ ತನ್ನ ಜೊತೆಯವರು ತನಗೆ ತೋರುವ ಭಾವನೆಯೇ ಅತನ ಸಾಮಾಜಿಕಾತ್ಮದ ಹುರುಳು. ಎಷ್ಟು ಜನ ತನ್ನನ್ನು ಸಂಭಾವಿಸುತ್ತಾರೋ ಅಷ್ಟು ಆತ್ಮಗಳು ಆತನಿಗುಂಟು. ಆಧ್ಯಾತ್ಮಿಕಾತ್ಮ ಯಾವುದೆಂದರೆ ವ್ಯಕ್ತಿಯೊಬ್ಬನ ಯೋಗ್ಯತೆಗಳು ಮತ್ತು ಮನೋಧರ್ಮಗಳು. ನಿರ್ಮಲಾಹಂಕಾರ ಯಾವುದೆಂದರೆ, ನಮ್ಮ ಅನುಭವಗಳೆಲ್ಲವುಗಳಲ್ಲೂ ಇದ್ದುಕೊಂಡು ಅವೆಲ್ಲವನ್ನೂ ಮೇಳೈಸುವಂತೆ ಮಾಡುವ ನಾನು ಎಂಬ ವ್ಯಕ್ತಿ ತತ್ತ್ವ. ಹೀಗೆ ದೇಹ ಮತ್ತು ಮನಸ್ಸಿನ ಸಂಬಂಧವನ್ನು ಕುರಿತ ಈ ಅಭಿಗಮನ ಅನುಭವೈಕ ಮಾರ್ಗವನ್ನು ಹಿಡಿದು ಆಲೋಚನೆಗಳಿಂದ ಆತ್ಮವನ್ನು ಮುಟ್ಟುತ್ತದೆ. ಈ ಎಲ್ಲೆಕಟ್ಟಿನಿಂದ ಆಚೆಗೆ ಸರಿದು ಆತ ನಿರಾಧಾರವಾದ ಸಿದ್ಧಾಂತಗಳನ್ನು ಸ್ಥಾಪಿಸಲು ಹೊರಡಲಿಲ್ಲ.       

	ವರ್ತನಾವಾದಿಗಳೆಂಬ ಮನಶ್ಯಾಸ್ತ್ರದ ಪಂಥವೊಂದರ ಅನುಯಾಯಿಗಳು ಪ್ರಜ್ಞೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾರೆ.  ಮನಶ್ಯಾಸ್ತ್ರದ ವ್ಯಾಸಂಗಕ್ಕೆ  ತಕ್ಕ ವಿಷಯ ಯಾವುದೆಂದರೆ ಮನುಷ್ಯನ ವರ್ತನೆ ಎಂದು ಅವರು ಹೇಳುತ್ತಾರೆ. ಅವರಿಗೆ ವರ್ತನೆಯೊಂದೇ ವಾಸ್ತವ ವಿಷಯ, ಮನಸ್ಸೂ ಅಲ್ಲ ಭೌತವಸ್ತುವೂ ಅಲ್ಲ. ಆಲೋಚನೆಯೂ ಒಂದು ಬಗೆಯ ಅಂತರಂಗದ ಭಾಷೆ ಎಂದು ಅವರ ಪರಿಗಣನೆ. ಆದುದರಿಂದ ವರ್ತನಾವಾದ ಮನಶ್ಯಾಸ್ತ್ರೀಯ ಸಕಲ ಸಿದ್ಧಾಂತಗಳ ಪೈಕಿ ಅತ್ಯಂತ ಭೌತಿಕವಾದದ್ದು, ಏಕೆಂದರೆ ಅದು ಮನಸ್ಸಿನ ಅಸ್ತಿತ್ವವನ್ನೇ ಸಂಪೂರ್ಣವಾಗಿ ನಿರಾಕರಿಸುತ್ತದೆ.
(ಎಸ್.ಪಿ.ಎಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ